ಸಿಳ ಮತ್ತು ಪಿಶಾಚ (Inspired by Oscar’s story)

ಅಟವಿಯ ಉಸಿರಲ್ಲಿ,ಶಶಿಯ ನೆರಳಲ್ಲಿ

ಹೆಮ್ಮರದ ಕೊಂಬೆಯಂಚಿನಲಿ ಕಾಮಿಸಿದಳು ಜಕಿಣಿ.

ನೆಡೆದು ಬರುತಿಹನು ಸಿಳ ಸತ್ಯಪೀಠದ ಒಡೆಯ

ಬಹು  ಜ್ಞಾನಿ, ಅದ ಮೀರಿ ಸುಂದರನಿವ

ಜಕಿಣಿ ಹೊರಟಳು, ಇವ ನನ್ನವನಾಗಲೆ ಬೇಕು,

ಹೊತ್ತು ತರಲೇ ಬೇಕು.

ಮರುಕ್ಷಣದಿ ಜಕಣಿ, ಸಿಳನ ಬದಿ ಬಂದು

ರತಿ, ಹೊನ್ನು, ನೆಲ ನಿನ್ನ ಕಾಲಾಳುಗಳು

ಸಾವಿಲ್ಲದ ಉತ್ತುಂಗದಾಸೆಗಳು ನಿನ್ನಲಂಕಾರವು

ಕಂಡದ್ದು, ಕೇಳಿದ್ದು, ಬೇಡಿದ್ದು, ಸಿಗದಿದ್ದು

ಎಲ್ಲವು ಇಗೊ ತಂದು ನಿನ್ನಡಿಯಲ್ಲಿಡುವೆ

ಒಮ್ಮೆ ಕಿತ್ತೆಸೆ ನಿನ್ನ ದಮ್ಮದ ಗೊಡವೆ.

ನಸು ನಕ್ಕು ಸಿಳ ಉಸುರಿದನು ಹಿಗೆಂದು,

ವಶವಾಗಲು ನಿನ್ನ, ಮತಿಹೀನ ನಾನಲ್ಲ

ಪುರುಷೋತ್ತಮನ ಪಾದದ ಬೆಳಕ ಮುಂದೆ

ನೀನಿಟ್ಟ ಕೊಡುಗೆಗಳು ಕಾಳಸಂತೆಯ ಕಸವು

ಮೋಕ್ಷದೊಡೆಯನ ಮುಂದೆ, ನಿನ್ನದೆಲ್ಲವು

ಕರಿಯ ಮುಂದಣ ಉಖ್ಯ, ಬೊಡ್ಡಿಕ್ಷಾಂತಿ.

ಇದಕೇಳಿ ನಡುಗುತ್ತ, ಮುದಿ ಪಿಶಾಚನರಸುತ್ತ.

ಅರಚುತ್ತ ಓಡುತ್ತ ಕಾಲಿಗೆರಗಿದಳು ಜಕಣಿ

ಎನ್ನ ಜಾತನೆ, ಅವಸೋಲದೆ ನಾನಿಲ್ಲ.

ಸಿಳನ ಬೇಧಿಸಲಾರೆ, ದಮ್ಮ ಭಂಜಿಸಲಾರೆ,ಸೋಲೊಪ್ಪಿ ಬದುಕಲಾರೆ

ಇದ ಕೇಳಿ ಪಿಶಾಚ, ಹೋ! ನಡೆ ಈಗಲೆ

ನನ್ನೀ ಜೀವಿತದ ಕಡಲಲ್ಲಿ ಕಂಡಿರುವ ಅಲೆಗಳು ಅಗಣಿತ.

ಬಂದವನೆ, ಸಿಳನ ತೇಜವ ಮೂಸಿ ನಗುತ್ತ,

ಉಸುರಿದನು ಪಿಶಾಚ ಸಿಳನ ಕಿವಿಯೊಳಗೆ.

ಕ್ಷಣವಾರುವ ಮುನ್ನ ಕಿತ್ತೆಸೆದ ಸಿಳ ತನ್ನ ದಮ್ಮದ ಹಾರ

ತನ್ನವರ ಶಪಿಸುತ್ತ, ಕೂಗುತ್ತ ಅರಚುತ್ತ

ಮುಡಿಯನ್ನ ಕಿತ್ತೆಸೆದು,ಬೈಗುಳ ಧ್ಯಾನಿಸುತ

ಕತ್ತಲ ಕತ್ತು ಹಿಸುಗಿ ರೋಷದಿ ನಡೆದ.

ಏನು ಮಾಯೆಯೊ ತಂದೆ, ಎಂತ ತಂತ್ರವೊ ಜನಕ

ಏನ ಉಸುರಿದೆ, ಅವನ ಮನದ ಒಳಗೆ?

ಇದೋ ಕೇಳು ಜಕಿಣಿಯೆಂದು ಪಿಶಾಚ ಪೇಳಿತು.

ಸಿಳನ ಮೊಗದಲಿ ಕಂಡೆ ಸತ್ಯಪೀಠದ ನೆರಳು

ನಸುನಕ್ಕು ಉಸುರಿದೆ “ನಿನ್ನ ಮಿತ್ರನು ನಾಳೆ ಸತ್ಯಪೀಠದ ಒಡೆಯ”


ಪದಗಳ ಅರ್ಥ

ಜಕಿಣಿ – ಹೆಣ್ಣು ಭೂತ ; ಕರಿ – ಆನೆ ; ಉಖ್ಯ – ಮಾಂಸ ; ಬೊಡ್ಡಿ – ವೇಶ್ಯೆ ; ಕ್ಷಾಂತಿ – ತಾಳ್ಮೆ  ; ಜಾತ – ತಂದೆ.