ಬಿಳಿ ಆನೆಗಳನ್ನಿಷ್ಟಪಡುವ ಬೆಟ್ಟಗಳು

ಹಾಲ ಬೆಟ್ಟಗಳ ಬಹು ಉದ್ದನೆಯ ಸಾಲು ಈಬ್ರೋ ನದಿ ಕಣಿವೆಗೆ ಮೋಹಕತೆಯ ಸೆಳೆತ ನೀಡಿತ್ತು, ಸಾಲುಗಳ ಒಂಬದಿಯಲ್ಲಿ ಮರ -ನೆರಳುಗಳ ಯಾವ ಸುಳಿವೂ ಇರಲಿಲ್ಲ. ಇವುಗಳನ್ನು ಸೀಳಿ ಹಾದು ಹೋಗಿದ್ದ ಹಳಿಗಳು ರವಿಯ ರಷ್ಮಿಗೆ ಮಿರಮಿರನೆ ಮಿರುಗುತಿದ್ದವು. ರೈಲು ನಿಲ್ದಾಣದ ಕಟ್ಟಡದ ನೆರಳಿನಲ್ಲಿದ್ದ ಬಾರಿನ ಬಾಗಿಲನ್ನು ಬಿದಿರಿನ ಮಣಿಗಳಿಂದ ಪೋಣಿಸಲ್ಪಟ್ಟ ಪರದೆ ಅಲಂಕರಿಸಿತ್ತು. ಅಮೇರಿಕದ ಓರ್ವ ವ್ಯಕ್ತಿ ಹಾಗು ಆತನ ಹುಡುಗಿ ಬಾರಿನ ಬಾಗಿಲಿನ ಆಚೆ ಇರಿಸಿದ್ದ ಟೇಬಲ್ ಬಳಿ ಕುಳಿತಿದ್ದರು. ಬಾರ್ಸಿಲೋನದಿಂದ ಬರಬೇಕಿದ್ದ ರೈಲಿಗೆ ಇನ್ನೂ ನಲ್ವತ್ತು ನಿಮಿಷಗಳಿತ್ತು. ಈ ನಿಲ್ದಾಣದಲ್ಲಿ ಎರಡು ನಿಮಿಷಗಳ ಕಾಲ ವಿರಮಿಸಿದ ಬಳಿಕ ರೈಲು ಮ್ಯಾಡ್ರಿಡ್-ಗೆ ತೆರಳುತಿತ್ತು.

hills like white elephants

“ಏನನ್ನಾದರು ಕುಡಿಯೋಣವೆ?” ತನ್ನ ಟೋಪಿಯನ್ನು ಟೇಬಲ್ ಮೇಲಿಟ್ಟು ಹುಡುಗಿ ಕೇಳಿದಳು.

“ಬಹಳ ಧಗೆಯಿದೆ” ಯುವಕನಲುಬಿದ.

“ಬೀರನ್ನು ಕುಡಿಯೋಣ”

“eಎರಡು ಬಿಯರ್,” ಯುವಕ ಪರದೆಯೊಳಗೆ ಕೂಗಿ ಹೇಳಿದ.

“ದೊಡ್ಡದೆ?” ಬಾರಿನ ಮಹಿಳೆ ಬಾಗಿಲಲ್ಲಿ ನಿಂತು ಕೇಳಿದಳು.

“ಹೌದು, ಎರಡು ದೊಡ್ಡದು.”

ಎರಡು ಗ್ಲಾಸ್ ಬೀರನ್ನು ತಂದ ಮಹಿಳೆ ಟೇಬಲ್ಲಿನ ಮೇಲಿಟ್ಟು,ಯುವಕ ಹಾಗು ಹುಡುಗಿಯನ್ನು ದಿಟ್ಟಿಸಿ ನೋಡಿದಳು. ಹುಡುಗಿ ಬೆಟ್ಟ ಸಾಲುಗಳ ಮೇಲೆ ಕಣ್ಣಾಯಿಸಿದ್ದಳು. ಆ ಸಾಲುಗಳು ಬಿಳುಪಾಗಿ ಕಂಡು, ಆ ಪ್ರದೇಶ ಒಣಗಿದಂತಿತ್ತು.

“ಅವು ಬಿಳಿ ಆನೆಗಳಂತೆ ಕಾಣುತ್ತಿವೆ,” ಅವಳೇಳಿದಳು.

“ನಾನು ಅಂತಹದನ್ನು ಎಂದಿಗೂ ಕಂಡಿಲ್ಲ,” ಯುವಕ ಬೀರನ್ನು ಗುಟುಕಿಸಿದ.

“ಇಲ್ಲ, ನೀನು ನೋಡಿರಲಾರೆ.”

“ನೋಡಿರಬಹುದು,” ಯುವಕನೇಳಿದ. “ನಾನು ನೋಡಿರಲಾರೆ ಎಂದು ನೀನು ಹೇಳಿದ ಮಾತ್ರಕ್ಕೆ, ಏನನ್ನೂ ತೋರ್ಪಡಿಸಲಿಲ್ಲ”

ಅವಳು ಬಿದಿರಿನ ಮಣಿಗಳ ಪರದೆಯನ್ನು ನೋಡಿದಳು. “ಅವರು ಅದರ ಮೇಲೆ ಏನನ್ನೋ ಬರೆದಿದ್ದಾರೆ,” ಹುಡುಗಿ ಕೇಳಿದಳು, “ಅದು ಏನನ್ನು ಹೇಳುತ್ತಿದೆ?”

“ಅನಿದೆಲ್ ತೊರೊ, ಅದು ಒಂದು ಪೇಯ.”

“ನಾವು ಕುಡಿದು ನೋಡೋಣವೆ?”

ಯುವಕ ಬಾರ್ ನ ಮಹಿಳೆಯನ್ನು ಕರೆದು.

“ನಾಲ್ಕು ರಿಯಲೆ.”

“ನಮಗೆ ಎರಡು ಅನಿದೆಲ್ ತೊರೊ ಬೇಕು.”

“ನೀರಿನ ಜೊತೆಯೆ?”

“ನಿನಗೆ ನೀರಿನ ಜೊತೆ ಬೇಕೆ?”

“ನನಗೆ ಗೊತ್ತಿಲ್ಲ,” ಹುಡುಗಿ ಹೇಳಿದಳು. “ನೀರಿನ ಜೊತೆ ಚೆನ್ನಾಗಿರುತ್ತದೆಯೆ?”

“ಪರವಾಗಿಲ್ಲ.”

“ನಿನಗೆ ನೀರಿನ ಜೊತೆ ಬೇಕೆ?” ಮಹಿಳೆ ಕೇಳಿದಳು.

“ಹೌದು.”

“ಇದು ಲಿಕೊರಿಸೆ ರೀತಿಯ ರುಚಿ ಇದೆ,” ಗ್ಲಾಸನ್ನು ಟೇಬಲ್ ಮೇಲೆ ಇಡುತ್ತ ಹುಡುಗಿ ಹೇಳಿದಳು.

“ಎಲ್ಲಾದರಲ್ಲೂ ಇದೇ ರುಚಿ.”

“ಹೌದು,” ಹುಡುಗಿ ಊಗುಟ್ಟಿದಳು. “ಎಲ್ಲವೂ ಲಿಕೊರಿಸೆ ತರಹ ಇರುತ್ತದೆ. ಅದರಲ್ಲೂ  ನೀನು ಬಹಳ ಕಾಲ ಕಾದಿದ್ದವುಗಳ  ಮೇಲೆ, ಅಬ್ಸಿಂತೆ ತರಹ.”

“ಓ, ಬಿಡು ಅದನ್ನ.”

“ನೀನು ಶುರುಮಾಡಿದ್ದು,” ಹುಡುಗಿ ಗಡುಸಾಗಿ ಹೇಳಿದಳು. “ನಾನು ಖುಷಿ ಪಡುತ್ತಿದ್ದೆ, ಒಳ್ಳೆಯ ಸಮಯವನ್ನು ಕಳೆಯುತಿದ್ದೆ.”

“ಸರಿ, ಈಗಲೂ ಖುಷಿಯಾಗಿರಲು ಪ್ರಯತ್ನಿಸೋಣ.”

“ಸರಿ, ನಾನೂ ಪ್ರಯತ್ನಿಸುತ್ತಿದ್ದೆ. ಬೆಟ್ಟಗಳು ಬಿಳಿ ಆನೆಗಳಂತಿವೆ ಎಂದು ಹೇಳಿದೆ. ಅವು ಪ್ರಕಾಶಿಸುತ್ತಿರಲಿಲ್ಲವೆ?”

“ಅದು ಪ್ರಕಾಶಿಸುತ್ತಿತ್ತು.”

“ನಾನು ಈ ಹೊಸ ಪೇಯವನನ್ನು ಕುಡಿಯಬೇಕೆಂದೆನಿಸಿತು. ನಾವು ಅಷ್ಟೇ ಅಲ್ಲವೆ ಮಾಡುವುದು- ನೋಡುವುದು ಹಾಗು ಹೊಸ ಪೇಯವನ್ನ ಪರೀಕ್ಷಿಸುವುದು?”

“ನನಗೂ ಹಾಗೆಯೆ ಅನ್ನಿಸುತ್ತದೆ.”

“ಅವು ಬಹಳ ಸುಂದರ ಬೆಟ್ಟಗಳು, ಅವೇನು ನಿಜವಾಗಿಯೂ ಬಿಳಿ ಆನೆಗಳ ರೀತಿ ಏನು ಕಾಣುವುದಿಲ್ಲ. ನಾನು ಸುಮ್ಮನೆ ಅದರ ಮೇಲ್ಮೈಯ ಬಣ್ಣಕ್ಕೆ ಹಾಗೆ ಹೇಳಿದೆ.”

“ಇನ್ನೊಂದು ಪೇಯವನ್ನು ಕುಡಿಯೋಣವೆ?”

“ಸರಿ.”

ತಾಪದ ಗಾಳಿ ಮಣಿ ಪರದೆಯನ್ನು ಟೇಬಲ್ಲಿಗೆ ಬೀಸಿತು.

“ ಬಿಯರ್ ತುಂಬ ಚೆನ್ನಾಗಿದೆ,” ಯುವಕನು ಹೇಳಿದ.

“ಅದ್ಭುತ,” ಹುಡುಗಿ ಎಂದಳು.

“ಇದು ನಿಜವಾಗಿಯೂ ಬಹಳ ಸುಲಭದ ಶಸ್ತ್ರಚಿಕಿತ್ಸೆ, ಜಿಗ್, ನಿಜವಾಗಿ ಹೇಳಬೇಕಾದರೆ ಇದು ಶಸ್ತ್ರಚಿಕಿತ್ಸೆಯೇ ಅಲ್ಲ.”

ಹುಡುಗಿ ಟೇಬಲ್ ಕಾಲುಗಳಿದ್ದ ನೆಲವನ್ನು ನೋಡುತಿದ್ದಳು.

“ನನಗೆ ಗೊತ್ತು, ನೀನು ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಜಿಗ್. ಇದು ಏನೇನು ಅಲ್ಲ. ಬರಿ ಗಾಳಿ ಒಳಗೆ ಬಿಡುವುದಷ್ಟೆ.”

ಹುಡುಗಿ ಏನನ್ನೂ ಹೇಳಲಿಲ್ಲ.

“ನಾನು ನಿನ್ನೊಂದಿಗೆ ಹೋಗುತ್ತೇನೆ. ನಿನ್ನೊಂದಿಗೆ ಯಾವಾಗಲೂ ಇರುತ್ತೇನೆ. ಅವರು ಬರಿ ಗಾಳಿ ಕಳುಹಿಸುತ್ತಾರೆ, ಅದಾದ ಮೇಲೆ ಎಲ್ಲ ನೈಜವಾಗಿರುತ್ತದೆ.”

“ಅದಾದ ಮೇಲೆ ನಾವು ಏನನ್ನು ಮಾಡುವುದು?” ಹುಡುಗಿ ಕೇಳಿದಳು.

“ನಾವು ಅದಾದ ಮೇಲೆ ಚೆನ್ನಾಗಿರುತ್ತೇವೆ. ಮುಂಚಿನ ತರಹ.”

“ಹೇಗೆ ಹೇಳುತ್ತೀಯ?”

“ಅದೊಂದೆ ನಮ್ಮನ್ನು ಬಾಧಿಸುತ್ತಿರುವುದು. ಅದೊಂದೆ ನಮ್ಮನ್ನು ದುಖಃದ ಕೂಪಕ್ಕೆ ತಳ್ಳಿರುವುದು.”

ಹುಡುಗಿ ಮಣಿ ಪರದೆಯನ್ನು ನೋಡಿದಳು, ಪರದೆಯ ಎರಡು ಮಣಿ ಸರವನ್ನು ಹಿಡಿದಳು.

“ಎಲ್ಲ ಸರಿಯಾಗಿ ನಾವು ಸಂತಸದಿಂದಿರುವೆವು ಎಂದು ನಿನಗೆ ಅನ್ನಿಸುತ್ತದೆಯೆ?”

“ನನಗೆ ಗೊತ್ತು, ನಾವು ಚೆನ್ನಾಗಿ ಇರುತ್ತೇವೆ. ನೀನು ಭಯ ಪಡಬೇಕಾಗಿಲ್ಲ. ನನಗೆ ಗೊತ್ತಿರುವ ಹಾಗೆ ಬಹಳ ಜನ ಅದನ್ನು ಮಾಡಿದ್ದಾರೆ.”

“ಹಾಗೆಯೇ ನಾನೂ ಸಹ,” ಹುಡುಗಿ ಹೇಳಿದಳು. “ಅದಾದ ಮೇಲೆ ಆವರು ಎಷ್ಟೋಂದು ಚೆನ್ನಾಗಿದ್ದರು.”

“ನಿನಗೆ ಬೇಡವಾದರೆ, ಬೇಕಾಗಿಲ್ಲ. ನಿನಗೆ ಇಷ್ಟವಿಲ್ಲದ ಮೇಲೆ ನಿನ್ನಿಂದ ಅದನ್ನು ಮಾಡಿಸುವುದಿಲ್ಲ. ಆದರೆ ನನಗೆ ಗೊತ್ತು, ಅದು ಬಹಳ ಸುಲಭವಾಗಿರುತ್ತೆ.”

“ನಿನಗೆ ಇದು ನಿಜವಾಗಿಯೂ ಬೇಕಾಗಿದೆಯೆ?”

“ನನಗೆ ಅನ್ನಿಸುತ್ತದೆ, ಇದು ಬಹಳ ಒಳ್ಳೆಯದೆಂದು. ಆದರೆ, ನಿನಗೆ ನಿಜವಾಗಿಯೂ ಬೇಡವಾದರೆ, ಬೇಕಾಗಿಲ್ಲ.”

“ನಾನು ಮಾಡಿಸಿದರೆ, ನಿನಗೆ ಸಂತೋಷವಾಗುತ್ತದೆ. ಎಲ್ಲವೂ ಇರುವ ಹಾಗೆಯೆ ಇದ್ದು, ನೀನು ನನ್ನನ್ನು ಪ್ರೀತಿಸುತ್ತೀಯ ಅಲ್ಲವೆ?”

“ನಿನ್ನನ್ನು ಈಗ ಪ್ರೀತಿಸುತ್ತಿದ್ದೇನೆ. ನಿನಗೆ ಗೊತ್ತು ನಾನು ನಿನ್ನನ್ನು ಪ್ರೀತಿಸುತ್ತೇನೆ.”

“ನನಗೆ ಗೊತ್ತು, ಆದರೆ ನಾನು ಅದನ್ನು ಮಾಡಿದರೆ, ಅವು ಬಿಳಿ ಆನೆಗಳ ಹಾಗೆ ಎಂದು ಹೇಳಿದರೆ, ನೀನು ಇಷ್ಟಪಡುವೆಯ?”

“ನಾನು ಇಷ್ಟ ಪಡುತ್ತೇನೆ, ಈಗಲೂ ಇಷ್ಟ ಪಡುತಿದ್ದೇನೆ ಆದರೆ ಅದರ ಬಗ್ಗೆ ಯೋಚಿಸಲಾಗತ್ತಿಲ್ಲ. ನಿನಗೆ ಗೊತ್ತಲ್ಲವೇ ನಾನು ಯೋಚನೆಯಲ್ಲಿ ಮುಳುಗಿದಾಗ ಹೇಗಾಗುತ್ತೇನೆಂದು.”

“ನಾನು ಇದನ್ನು ಮಾಡಿದ ಮೇಲೆ ನೀನು ಯಾವತ್ತೂ ಯೋಚಿಸುವುದಿಲ್ಲವೆ?”

“ನಾನು ಅದರ ಬಗ್ಗೆ ಯೋಚಿಸುವುದೇ ಇಲ್ಲ ಏಕೆಂದರೆ ಇದು ಬಹಳ ಸುಲಭ.’

“ಹಾಗಾದರೆ, ನಾನು ಇದನ್ನು ಮಾಡುತ್ತೇನೆ. ಏಕೆಂದರೆ ನಾನು ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.”

“ಅಂದರೆ?”

“ನಾನು ನನ್ನ ಬಗ್ಗೆ ಕಾಳಜಿ ವಹಿಸುವುದಿಲ್ಲ.”

“ನಾನು ನಿನ್ನ ಬಗ್ಗೆ ಕಾಳಜಿ ವಹಿಸುತ್ತೇನೆ.”

“ಹಾ! ಹೌದು. ಆದರೆ ನಾನು ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾನು ಇದನ್ನು ಮಾಡುತ್ತೇನೆ, ಆಮೇಲೆ ಎಲ್ಲವೂ ಸರಿ ಹೋಗುತ್ತದೆ.”

“ನೀನು ಆ ರೀತಿ ಭಾವಿಸಿದರೆ, ನೀನು ಇದನ್ನು ಮಾಡಬೇಕಾಗಿಲ್ಲ.”

ಹುಡುಗಿ ಎದ್ದು ನಿಂತು, ನಿಲ್ದಾಣದ ಕೊನೆಯವರೆಗು ನಡೆದಳು. ಆಚೆಗೆ, ಹೊಲಗಳು ಇದ್ದು, ಮರಗಳು ಈಬ್ರೊ ನದಿಯ ದಂಡೆಯ ಉದ್ದಕ್ಕೂ ಇದ್ದವು. ಬಹಳ ದೂರದಲ್ಲಿ, ಆ ನದಿಯಾಚೆ ಸಾಲು ಬೆಟ್ಟಗಳಿದ್ದವು. ಆಗಸದ ಮೋಡಗಳ ನೆರಳು ಹೊಲಗಳ ಮೇಲೆ ಚಲಿಸುತಿತ್ತು. ಅವಳು ಮರಗಳ ಬೆನ್ನಿಂದೆ ಹರಿಯುತ್ತಿದ್ದ ನದಿಯನ್ನು ಕಾಣುತಿದ್ದಳು.

“ನಮಗೆ ಈ ಎಲ್ಲವೂ ಸಿಗಬಹುದು, ಪ್ರತಿಯೊಂದೂ ನಮ್ಮದಾಗಬಹುದು ಮತ್ತು ಪ್ರತಿ ದಿನ ನಾವು ಇದನ್ನು ಇನ್ನೂ ಅಸಾದ್ಯಗೊಳಿಸುತಿದ್ದೇವೆ.” ಹುಡುಗಿ ಹೇಳಿದಳು.

“ನೀನು, ಏನು ಹೇಳಿದೆ?”

“ಪ್ರತಿಯೊಂದು ನಮ್ಮದಾಗಬಹುದೆಂದು ನಾನು ಹೇಳಿದೆ.”

“ಎಲ್ಲವೂ ನಮ್ಮದಾಗುತ್ತದೆ.”

“ಇಲ್ಲ, ಸಾಧ್ಯವಿಲ್ಲ.”

“ಈ ಪ್ರಪಂಚವೇ ನಮ್ಮದಾಗುತ್ತದೆ.”

“ಇಲ್ಲ, ನಮಗೆ ಸಾಧ್ಯವಿಲ್ಲ.”

“ನಾವು ಎಲ್ಲಾ ಕಡೆ ಹೋಗಬಹುದು.”

“ಇಲ್ಲ, ನಮಗೆ ಆಗುವುದಿಲ್ಲ. ಇದು ಇನ್ನು ಎಂದೆದಿಗೂ ನಮ್ಮದಲ್ಲ.”

“ಇದು ನಮ್ಮದು.’

“ಇಲ್ಲ, ಇದು ನಮ್ಮದಲ್ಲ. ಒಮ್ಮೆ ಅವರು ಅದನ್ನು ತೆಗೆದಮೇಲೆ, ನಿನಗೆ ಮತ್ತೆ ಎಂದಿಗೂ ಸಿಗುವಿದಿಲ್ಲ.”

“ಆದರೆ ಅವರು ಇದನ್ನು ತೆಗೆದುಕೊಂಡು ಹೋಗಿಲ್ಲ.”

“ನಾವು ಕಾದು ನೋಡೋಣ,”

“ನೆರಳಿಗೆ ಬಾ,” ಅವನು ಹೇಳಿದ. “ನೀನು ಆ ರೀತಿ ಭಾವಿಸಬಾರದು.”

“ನಾನು ಏನನ್ನೂ ಭಾವಿಸುತ್ತಿಲ್ಲ,” ಹುಡುಗಿ ಹೇಳಿದಳು. “ನನಗೆ ಕೆಲವುಗಳು ಹೇಗೆ ಎಂಬುದು ಗೊತ್ತು ಅಷ್ಟೆ.”

“ನಿನಗೆ ಇಷ್ಟವಾಗದ ಯಾವುದನ್ನೂ ನೀನು ಮಾಡುವುದು ನನಗೆ ಬೇಡ—.”

“ಅದು ನನಗೂ ಒಳ್ಳೆಯದಲ್ಲ,” ಅವಳು ಹೇಳಿದಳು. “ನನಗೆ ಗೊತ್ತಿದೆ. ನಾವು ಇನ್ನೊಂದು ಬಿಯರ್ ಕುಡಿಯೋಣವೆ?”

“ಸರಿ, ಆದರೆ ನೀನು ಅರ್ಥ ಮಾಡಿಕೊಳ್ಳಬೇಕು—,”

“ನಾನು ಅರ್ಥ ಮಾಡಿಕೊಳ್ಳುತ್ತೇನೆ,” ಹುಡುಗಿ ಹೇಳಿದಳು. “ ನಾವು ಮಾತಾಡದಿರಲು ಆಗುವುದಿಲ್ಲವೆ?”

ಅವರು ಟೇಬಲ್ ಬಳಿ ಕುಳಿತರು. ಹುಡುಗಿ ಕಣಿವೆಯ ಒಣ ಪ್ರದೇಶದ ಗುಡ್ಡಗಳನ್ನು ನೋಡುತಿದ್ದಳು ಹಾಗು ಅವನು ಅವಳನ್ನು ದಿಟ್ಟಿಸುತ್ತಿದ್ದ.

“ನೀನು ಅರ್ಥಮಾಡಿಕೊಳ್ಳಬೇಕು,” ಅವನೇಳಿದ, “ನಿನಗೆ ಬೇಡವಾದರೆ, ಬೇಕಾಗಿಲ್ಲ. ನಿನಗೆ ಇಷ್ಟವಿಲ್ಲದ ಮೇಲೆ ನಿನ್ನಿಂದ ಅದನ್ನು ಮಾಡಿಸುವುದಿಲ್ಲ. ಅದು ನಿನಗೆ ಬಹಳ ಬೇಕಾದರೆ, ಅದರ ಜೊತೆ ನಾನು ಕಂಡಿತ ಬಾಳುತ್ತೇನೆ.”

“ಅದು ನಿನಗೆ ಏನೂ ಅಲ್ಲವೆ? ನಾವು ಬಾಳಬಹುದು.”

“ಕಂಡಿತ ಬಾಳಬಹುದು. ಆದರೆ ನನಗೆ ನಿನ್ನ ಬಿಟ್ಟು ಬೇರಾರು ಬೇಡ. ನನಗೆ ಯಾರೂ ಬೇಡ. ಮತ್ತು, ಇದು ಬಹಳ ಸುಲಭ.”

“ಹೌದು, ನಿನಗೆ ಗೊತ್ತು ಇದು ಬಹಳ ಸುಲಭ.”

“ನೀನು ಆ ರೀತಿ ಹೇಳಬಹುದು, ಆದರೆ ನನಗೆ ಇದು ಗೊತ್ತು.”

“ನೀನು ನನಗಾಗಿ ಏನಾದರೂ ಮಾಡುತ್ತೀಯ?”

“ನಾನು ನಿನಗಾಗಿ ಏನು ಬೇಕಾದರೂ ಮಾಡುತ್ತೇನೆ.”

“ನೀನು ದಯವಿಟ್ಟು ದಯವಿಟ್ಟು, ದಯವಿಟ್ಟು ದಯವಿಟ್ಟು ದಯವಿಟ್ಟೂ ಮಾತನಾಡುವುದ ನಿಲ್ಲಿಸುತ್ತೀಯ?”

ಅವನು ಏನೂ ಹೇಳಲಿಲ್ಲ, ಅವನು ಗೋಡೆಗೆ ಒರಗಿಸಿದ್ದ ಬ್ಯಾಗುಗಳನ್ನು ನೋಡುತಿದ್ದನು. ಅವುಗಳ ಮೇಲೆ ಅವರು ರಾತ್ರಿಗಳನ್ನು ಕಳೆದ ಹೊಟೆಲ್ಲುಗಳ ಸೂಚಕಗಳಿದ್ದವು.

“ಆದರೆ, ನನಗೆ ನೀನು ಮಾಡುವುದು ಬೇಕಾಗಿಲ್ಲ,” ಅವನೇಳಿದ, “ಅದರ ಮೇಲೆ ನಾನು ತಲೆ ಕೆಡಿಸಿಕೊಳ್ಳುವುದೇ ಇಲ್ಲ.”

“ನಾನು ಈಗ ಕಿರಿಚುತ್ತೇನೆ,” ಹುಡುಗಿ ಹೇಳಿದಳು.

ಮಹಿಳೆ ಬಾರಿನ ಪರದೆ ಸೀಳಿ, ಎರಡು ಬಿಯರ್ ಗ್ಲಾಸಿನೊಂದಿಗೆ ಬಂದು ಟೇಬಲ್ ಮೇಲೆರಿಸಿ ಹೇಳಿದಳು. “ರೈಲು ಇನ್ನು ಐದು ನಿಮಿಷದಲ್ಲಿ ಬರುತ್ತದೆ,”.

“ಅವಳು ಏನೇಳಿದಳು?” ಹುಡುಗಿ ಕೇಳಿದಳು.

“ರೈಲು ಇನ್ನು ಐದು ನಿಮಿಷದಲ್ಲಿ ಬರುವುದಂತೆ”

ಹುಡುಗಿ ಮಹಿಳೆಯನ್ನು ನೋಡಿ ಧನ್ಯವಾದ ತಿಳಿಸುವಂತೆ ತಿಳಿ ನಗೆ ಬೀರಿದಳು.

“ನಾನು ಈ ಬ್ಯಾಗುಗಳನ್ನು ಸ್ಟೇಷನ್ನಿನ ಆ ಕಡೆ ತೆಗೆದುಕೊಂಡು ಹೋಗುತ್ತೇನೆ,” ಯುವಕನೇಳಿದ. ಅವಳು ಅವನ ಕಂಡು ನಕ್ಕಳು.

“ಸರಿ, ಆಮೇಲೆ ಬಂದು ಬೀರನ್ನು ಪೂರ್ತಿ ಮುಗಿಸೋಣ.”

ಅವನು ಎರಡು ತೂಕವಿದ್ದ ಬ್ಯಾಗುಗಳನ್ನು ಹೊತ್ತು ನಿಲ್ದಾಣವನ್ನು ತಿರುಗಿ, ಇನ್ನೊಂದು ಹಳಿಗಳ ಬಳಿಗೆ ತೆರಳಿದನು. ಅವನು ಹಳಿಯ ಉದ್ದಕ್ಕೂ ಕಣ್ಣಾಯಿಸಲು, ರೈಲು ಕಾಣಲಿಲ್ಲ. ಮತ್ತೆ ವಾಪಸ್ಸು, ರೈಲಿಗೆ ಕಾಯುತ್ತಿದ್ದ ಜನಗಳು ಕುಡಿಯುತ್ತಿದ್ದ ಬಾರ್ ರೂಮಿಗೆ  ಬಂದನು. ಅಲ್ಲಿ ಮಿಕ್ಕಿದ್ದ ಆನಿಯನ್ನು ಕುಡಿದು ಜನಗಳನ್ನು ನೋಡಿದನು. ಅವರೆಲ್ಲರೂ ರೈಲಿನ ಬರುವಿಕೆಯ ಕಾರಣಕ್ಕಾಗಿ ಕಾಯುತ್ತಿದ್ದರು. ಅವನು ಪರದೆ ಸೀಳಿ ಬಾರಿನ ಒಳಕ್ಕೆ ಹೋದನು. ಅವಳು ಟೇಬಲ್ ಬಳಿ ಕುಳಿತಿದ್ದಳು ಮತ್ತು ಅವನನ್ನು ಕಂಡು ಮುಗುಳ್ನಗೆ ಬೀರಿದಳು.

“ಆರಾಮಾಗಿ ಅನಿಸುತ್ತಿದೆಯೆ?” ಅವನು ಕೇಳಿದ.

“ಆರಾಮೆನಿಸುತ್ತಿದೆ,” ಅವಳೇಳಿದಳು. “ಏನು ಕಷ್ಟವಿಲ್ಲ, ನಾನು ಚೆನ್ನಾಗಿದ್ದೇನೆ.”

(ಮೂಲ: ಅರ್ನೆಸ್ಟ್ ಹೆಮಿಂಗ್ ವೇ)